ಅಪಸಣಬು		 
	
iಇದು ಫ್ಯಾಂಬೇಸೀ ಕುಟುಂಬದ ಫ್ಯಾಬಾಯ್ಡೀ(ಪ್ಯಾಪಿಲಿಯೋನಾಯ್ಡೀ) ಉಪಕುಟುಂಬಕ್ಕೆ ಸೇರಿದೆ. ಕ್ರೋಟಲೇರಿಯ ಜನ್ಸಿಯ ಇದರ ವೈಜ್ಞಾನಿಕ ಹೆಸರು. ನಾರು ಮತ್ತು ಹಸುರೆಲೆ ಗೊಬ್ಬರಕ್ಕಾಗಿ ಬೆಳೆಸುವ ಒಂದು ಸಸ್ಯ (ಸನ್ ಹೆಂಪ್). ನಾರಿನ ಉತ್ಪನ್ನದಲ್ಲಿ ಮೊದಲನೆ ಸ್ಥಾನ ಸೆಣಬಿಗಾದರೆ ಎರಡನೆಯದು ಅಪಸಣಬು.
	
1.5 ರಿಂದ 3 ಮೀ. ಎತ್ತರ ಬೆಳೆಯುವ ಗಿಡ ಇದು. ಸಣ್ಣ ಇಲ್ಲವೆ ದಪ್ಪ ಬೀಜದ ಎರಡು ಬಗೆಗಳಿವೆ. ಸಣ್ಣ ಬೀಜದವು ಹೆಚ್ಚಾಗಿ ಕವಲೊಡೆಯುವಂತಿದ್ದು ಹೆಚ್ಚು ಸೊಪ್ಪು ಒದಗಿಸಬಲ್ಲವು. ದಪ್ಪ ಬೀಜದವು ದೃಢವಾಗಿ, ನೇರವಾಗಿ, ಕವಲಿಲ್ಲದೆ ಬೆಳೆಯುವುದರಿಂದ ನಾರಿಗೆ ಉತ್ತಮ. ಎಲೆಗಳು ಸಣ್ಣವು, ಹೂ ಅಚ್ಚಹಳದಿ, ಕಾಯಿಯ ಸಿಪ್ಪೆ ದಪ್ಪ, ಬೀಜ ಹೆಚ್ಚು.
	
ಅಪಸಣಬನ್ನು ಉಷ್ಣ ಮತ್ತು ಸಮಶೀತೋಷ್ಣ ವಲಯದಲ್ಲಿ 50 - 45 ಸೆಂ.ಮೀ. ಮಳೆಯಾಗುವ ಪ್ರದೇಶದಲ್ಲೆಲ್ಲ ಚೆನ್ನಾಗಿ ಬೆಳೆಸಬಹುದು. ಕಡಿಮೆ ಮಳೆಬೀಳುವ ಪ್ರದೇಶಗಳಲ್ಲೂ ಇದನ್ನು ಬೆಳೆಸಬಹುದಾದ್ದರಿಂದ, ಭಾರತದಲ್ಲಿ ಹೆಚ್ಚಾಗಿ ಬೇಸಾಯ ಮಾಡಲಾಗಿದೆ. ಚೌಳು ಅಥವಾ ಕರಲುಭೂಮಿಯಲ್ಲಿ ಮಾತ್ರ ಬೆಳೆಯವುದು. ನಾರಿಗಾಗಿ ವ್ಯವಸಾಯಮಾಡುವವರು ಕೆಂಪು ಅಥವಾ ಮರಳುಮಿಶ್ರಿತ ಕೆಂಪು ಭೂಮಿಯಲ್ಲಿ ಎಕರೆಗೆ 20 ಕೆಜಿ. ಪೌಂಡಿನಂತೆ ಬೀಜವನ್ನು ಸಾಲುಗಳಾಗಿ ಕೂರಿಗೆಯಲ್ಲಿ ಬಿತ್ತುತ್ತಾರೆ. ಬೀಜಕ್ಕಾಗಿ ಬಿತ್ತುವವರು ರಾಗಿ, ನವಣೆ ಬೆಳೆಗಳಲ್ಲಿ ಅಕ್ಕಡಿ ಸಾಲುಗಳಾಗಿ ಮತ್ತು ಗದ್ದೆಯಲ್ಲಿ ಬೆಳೆಸುವುದು ಸಾಮಾನ್ಯ.
	
ಇದರ ಬೆಳಸಿಗೆ ಹೆಚ್ಚಿನ ಬೇಸಾಯ ಬೇಕಿಲ್ಲ. ಗಾಳಿಯಲ್ಲಿನ ಸಾರಜನಕಾಂಶವನ್ನು ಹೀರಿ ಬೇರುಗಳಲ್ಲಿ ಸೂಕ್ಷ್ಮಾಣುಗಳ ಗಂಟಾಗಿ (ನಾಡ್ಯೂಲ್ಸ್) ಶೇಖರಿಸಿಟ್ಟುಕೊಂಡು ಭೂಸಾರವನ್ನು ವೃದ್ಧಿಗೊಳಿಸಲು ಇದು ಸಹಾಯಕ. ಅದ್ದರಿಂದಲೇ ಬತ್ತದ ಬಿತ್ತನೆಗೆ ಮುಂಚೆ ಇವನ್ನು ಬೆಳೆಸಿ ಉತ್ತುಬಿಡುವುದರಿಂದ ಭೂಮಿಯ ಸಾರ ಹೆಚ್ಚಾಗಿ ಮುಂದಿನ ಬೆಳೆಗೆ ಅನುಕೂಲವಾಗುತ್ತದೆ. ಮುಖ್ಯವಾಗಿ ಇದನ್ನು, ಉತ್ತರ ಪ್ರದೇಶ, ಬಿಹಾರ, ಆಂಧ್ರಪ್ರದೇಶ, ತಮಿಳುನಾಡು, ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ಹೆಚ್ಚಾಗಿ ಬೆಳೆಸಲಾಗುತ್ತಿದೆ.
	
ಎಕರೆಗೆ 250 - 500 ಕೆಜಿ. ಪೌಂಡುಗಳಷ್ಟು ಉತ್ತಮ ಸೊಪ್ಪು ದೊರಕುತ್ತದೆ. ಒಂದು ಬಗೆಯ ಪತಂಗ, ಎಲೆ ತಿನ್ನುವ ಕೀಟಗಳು, ಕಾಯಿ ಕೊರೆಯುವ ಹುಳ, ಹಾಗೂ ಹಲವು ರೋಗಗಳು ಬಾಧಿಸುವುದರಿಂದ ಇವುಗಳ ವಿರುದ್ಧ ಸಂರಕ್ಷಣಾಕ್ರಮ ಕೈಗೊಳ್ಳಬೇಕು.
	
ನಾರಿಗಾಗಿ ಇದನ್ನು ಬೆಳೆಸಿದಾಗ ಗಿಡ ಹೂ ಬಿಟ್ಟಕೂಡಲೇ ನೆಲಮಟ್ಟಕ್ಕೆ ಕೊಯ್ದು ಅಥವಾ ಬೇರು ಸಹಿತ ಕಿತ್ತು, ಕೊಳೆಸಿ, ಜಜ್ಜಿ ನಾರು ತೆಗೆಯುತ್ತಾರೆ. ಎಕರೆಗೆ 1000 - 2000 ಕೆಜಿ. ನಾರು ಉತ್ಪನ್ನವಾಗುತ್ತದೆ. ನಾರು ಹಗ್ಗ ಮತ್ತು ಹುರಿಯ ತಯಾರಿಕೆಗೆ ಬಳಕೆಯಾಗುತ್ತದೆ. ಹುರಿ ಅಥವಾ ದಾರದಿಂದ ಸಂಯುಕ್ತಸಂಸ್ಥಾನ ಮತ್ತು ಬೆಲ್ಜಿಯಂ ಮುಂತಾದೆಡೆ, ಮೀನುಗಾರಿಕೆಗೆ ಅನುಕೂಲವಾದ ಬಲೆ, ದಪ್ಪ ಹಗ್ಗ ಮುಂತಾದುವನ್ನು ತಯಾರಿಸುತ್ತಾರೆ.							
												(ಕೆ.ಜಿ.ಎಚ್.)
										(ಪರಿಷ್ಕರಣೆ: ಕೆ ಬಿ ಸದಾನಂದ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ